
ಬೆಂಗಳೂರು: ವೈದ್ಯಕೀಯ ಸ್ನಾತಕೋತ್ತರ ಪದವಿ ಪ್ರವೇಶದ ಸೀಟು ಹಂಚಿಕೆ ಪ್ರಕ್ರಿಯೆಗೆ (ಕೌನ್ಸಿಲಿಂಗ್) ಅವಕಾಶ ನೀಡುವಂತೆ ಕೋರಿ ವಿದ್ಯಾರ್ಥಿಗಳು ದಾಖಲಿಸಿದ್ದ ಅರ್ಜಿಗೆ
ಸಂಬಂ„ಸಿದಂತೆ ಖುದ್ದು ಹಾಜರಾಗುವಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ಆದೇಶಿಸಿದೆ. ವೈದ್ಯಕೀಯ ಸ್ನಾತಕೋತ್ತರ ಪದವಿಗೆ ನಾಲ್ಕು ಸುತ್ತಿನಲ್ಲಿ ಕೌನ್ಸಿಲಿಂಗ್ ನಡೆಯುತ್ತದೆ. ಮೂರು ಸುತ್ತು ಆನ್‍ಲೈನ್ ಮೂಲಕ ನಡೆಯಲಿದ್ದು, ನಾಲ್ಕನೆಯದು ಆಫ್ ಲೈನ್
ಆಗಿರುತ್ತದೆ. ಆದರೆ, ನಾಲ್ಕನೇ ಸುತ್ತಿನ ಕೌನ್ಸಿಲಿಂಗ್‍ನಲ್ಲಿಭಾಗವಹಿಸಲು ತಮಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಎಸ್. ನೂತನಾ ಸೇರಿ 92 ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನಡೆಸಿದ ನ್ಯಾ. ಎನ್.ಕುಮಾರ್ ಹಾಗೂ ನ್ಯಾ. ಶ್ರೀನಿವಾಸೇಗೌಡ ಅವರಿದ್ದ ವಿಭಾಗೀಯ ಪೀಠ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟು ನೀಡುವುದು
ಸರ್ಕಾರದ ಕರ್ತವ್ಯ. ಸರ್ಕಾರ ವಿದ್ಯಾರ್ಥಿಗಳ ಪರವಾಗಿದೆಯೋ ಅಥವಾ ಖಾಸಗಿ ಮ್ಯಾನೇಜ್‍ಮೆಂಟ್ ಪರವಾಗಿದೆಯೋ ಎಂದು ಸರ್ಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.
`ಸರ್ಕಾರಿ ಸೀಟುಗಳನ್ನು ಪ್ರತಿಭಾವಂತರಿಗೆ ಸಿಇಟಿ ಮೂಲಕ ಹಂಚಿಕೆ ಮಾಡಬೇಕು. ಈ ಕೆಲಸ ಮಾಡಲು ಸರ್ಕಾರಕ್ಕೆ ಆಗದಿದ್ದಲ್ಲಿ ತಿಳಿಸಿ ಹೇಗೆ ಸೀಟುಗಳನ್ನು ಹಂಚಿಕೆ
ಮಾಡಬೇಕು ಎಂಬುದರ ಕುರಿತು ನಾವೇ ಆದೇಶಿಸುತ್ತೇವೆ'ಎಂದು ವಿಭಾಗೀಯ ಪೀಠ ಸರ್ಕಾರವನ್ನು ಎಚ್ಚರಿಸಿತು. ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಕೀಲ ಶೌರಿ ವಾದ ಮಂಡಿಸಿ, ವಿದ್ಯಾರ್ಥಿಗಳಿಗೆ ನಾಲ್ಕನೇ ಸುತ್ತಿನ ಕೌನ್ಸಿಲಿಂಗ್‍ಗೆ ಭಾಗವಹಿಸಲು ಅವಕಾಶ ನೀಡದೇ ಸರ್ಕಾರ ಸೀಟನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದೆ ಎಂದು ದೂರಿದರು. ವಾದ ಆಲಿಸಿದ ವಿಭಾಗೀಯ ಪೀಠ,ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಗುರುವಾರ ಖುದ್ದು ಹಾಜರಾಗುವಂತೆ ಆದೇಶಿಸಿದೆ.
ಏನಿದು ಪ್ರಕರಣ?
ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಪ್ರವೇಶಕ್ಕಾಗಿ ಏಪ್ರಿಲ್ 4ರಿಂದ ಕೌನ್ಸಿಲಿಂಗ್ ಪ್ರಾರಂಭವಾಗಿತ್ತು.ಒಂದನೇ ಸುತ್ತಿನಲ್ಲಿ ವಿದ್ಯಾರ್ಥಿಗಳಿಗೆ ತಮ್ಮಿಚ್ಛೆಯ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲು ಅಥವಾ ತಿರಸ್ಕರಿಸಲು, ಇಲ್ಲವೇ ಒಂದು ಆಯ್ಕೆಯ ಜತೆಗೆ ಇನ್ನೊಂದು ಸುತ್ತಿನಲ್ಲಿ ಪಾಲ್ಗೊಳ್ಳಲು ಅವಕಾಶ ಒದಗಿಸಲಾಗಿತ್ತು. ಎರಡನೆ ಸುತ್ತಿಗೆ, ಆಯ್ಕೆಗಳನ್ನು ತಿರಸ್ಕರಿಸಿದ ಹಾಗೂ ಎರಡನೆ ಸುತ್ತಿನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಹೆಚ್ಚಿನ ಸೀಟುಗಳು ಖಾಲಿ ಉಳಿದ ಹಿನ್ನೆಲೆಯಲ್ಲಿ ಮೂರನೆ ಸುತ್ತಿನಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್‍ನಲ್ಲಿ ಮತ್ತೊಮ್ಮೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿ ಸರ್ಕಾರ ಕೌನ್ಸಿಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಆದರೆ, ಕೆಲ ಉತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಸೀಟುಗಳನ್ನು ಹಿಂದಿರುಗಿಸಿದ್ದರಿಂದ ಅವುಗಳು ಮ್ಯಾನೇಜ್‍ಮೆಂಟ್ ಕೋಟಾದ ಪಾಲಾಗುವುದನ್ನು ತಡೆಯಲು ನಾಲ್ಕನೆ ಸುತ್ತಿನ ಆನ್ ಲೈನ್ ಕೌನ್ಸಲಿಂಗ್ ನಡೆಸಲಾಗಿತ್ತು. ಆದರೆ, ಈಗಾಗಲೆ ಎರಡನೇ ಮತ್ತು ಮೂರನೇ ಸುತ್ತಿನಲ್ಲಿ ಸೀಟು ಪಡೆದಿರುವವರಿಗೆ ಈ ಸಂದರ್ಭದಲ್ಲಿ ಅವಕಾಶ ಕಲ್ಪಿಸಿರಲಿಲ್ಲ. ಸರ್ಕಾರದ ಈ ಕ್ರಮ ಪ್ರಶ್ನಿಸಿ 92 ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Advertisement